ಶ್ರೀನಿವಾಸ ಅಯ್ಯಂಗಾರ್, ಎಂ ಜಿ
	ವೀಣಾ ಮಾಂತ್ರಿಕ ಎಂ.ಜೆ. ಶ್ರೀನಿವಾಸ ಅಯ್ಯಂಗಾರ್ಯರು ಹುಟ್ಟಿದ್ದು 1924ನೆ ಇಸವಿಯ ಮೇ 20ರಂದು. ತಂದೆ ಜನಾರ್ದನ ಅಯ್ಯಂಗಾರ್ ತಾಯಿ ಜಾನಕಮ್ಮ. ಇವರ ಮೂಲ ಸ್ಥಳ ಹಾಸನ ಜಿಲ್ಲೆಯ ದೊಡ್ಡ ಮಗ್ಗೆ ಗ್ರಾಮ. ಜನಾರ್ದನ ಅಯ್ಯಂಗಾರ್ ಅವರು ಕೃಷಿಕರು. ವೈಣಿಕ ಪ್ರವೀಣ ವೆಂಕಟಗಿರಿಯಪ್ಪನವರ ಶಿಷ್ಯರು. ಸ್ವತಃ ಹಾಡುವುದರಲ್ಲಿ ಮತ್ತು ವೀಣೆ ನುಡಿಸುವುದರಲ್ಲಿ ಪರಿಶ್ರಮ ಹೊಂದಿದ್ದರು. ದೂರದ ಗ್ರಾಮದಲ್ಲಿ ಇದ್ದರೂ ಕೂಡ ವೆಂಕಟಗಿರಿಯಪ್ಪನವರು ಸಂಪರ್ಕ ಇತ್ತು. ಪತ್ರದಲ್ಲಿ ವೀಣೆಯನ್ನು ಅಭ್ಯಾಸಮಾಡುವುದೇ ಅಲ್ಲದೆ ಅದನ್ನು ಬೇರೆ ಮಕ್ಕಳಿಗೂ ಕಲಿಸುವಂತೆ ತಿಳಿಸುತ್ತಿದ್ದರು.

	ವೀಣಾ ಗುರು ಶ್ರೀನಿವಾಸರಿಗೆ ಮನೆ ಮೊದಲ ಪಾಠಶಾಲೆಯಾಯಿತು, ತಂದೆಯೇ ಮೊದಲ ಗುರು. ಐದರ ಎಳೆ ಹರೆಯದಲ್ಲಿಯೇ ಹಾಡುಗಾರಿಕೆ ಪಾಠ ಪ್ರಾರಂಭವಾಯಿತು. ಬಾಲ್ಯದಲ್ಲಿಯೇ ಲಯ ಗ್ರಹಿಕೆ ಅತ್ಯುತ್ತಮವಾಗಿತ್ತು. ತಂದೆ ಸೈಕಲ್ಲಿನ ಗಂಟೆ  ಕೊಟ್ಟು “ನಾನು ನುಡಿಸುವ ಗತಿಗೆ ಸರಿಯಾಗಿ ಇದನ್ನು ಹೊಡೆ” ಎಂದು ಹೇಳುತ್ತಿದ್ದರಂತೆ. ಹೀಗೆ ಸಂಗೀತ ಕೇವಲ ಒಣ ಕಲಿಕೆಯಾಗದೆ ಒಂದು ಆಟವಾಗಿ ಬಿಟ್ಟಿತ್ತು. ಎಂಟನೆಯ ವಯಸ್ಸಿಯಲ್ಲಿ ಬಂದ ಟಾನ್ಸಿಲ್ಲಿನ ತೊಂದರೆ ಶಾಪವಾಯಿತು. ವೈದ್ಯಕೀಯ ನೆರವು ದೊರಕದೆ ಇವರು ಹಾಡುಗಾರಿಕೆಯನ್ನೇ ಬಿಡಬೇಕಾಗಿ ಬಂದಿತು. ವೀಣಾವಾದನವನ್ನೆ ಕಲಿಯಲಾರಂಭಿಸಿದ್ದು ಕರ್ನಾಟಕ ಸಂಗೀತದ ಸೌಭಾಗ್ಯ.

	ಲೋಯರ್ ಸೆಕೆಂಡರಿ ಪರೀಕ್ಷೆ ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ಮತ್ತು ವೀಣಾವಾದನದ ಹೆಚ್ಚಿನ ಕಲಿಕೆಗೆ ಶ್ರೀನಿವಾಸ ಮೈಸೂರಿಗೆ ಬಂದರು. ಬಂಧುಗಳ ಮನೆಯಲ್ಲಿ ವಾಸ, ತಂದೆಯ ಗುರುಗಳಾದ ವೀಣಾ ವೆಂಕಟಗಿರಿಯಪ್ಪನವರಲ್ಲಿಯೇ ವೀಣೆಯ ಅಭ್ಯಾಸ. ಎಲ್ಲಾ ಕೃಷಿ ಕುಟುಂಬಗಳಂತೆ, ಮನೆಯಲ್ಲಿ ಧವಸ ಧಾನ್ಯಗಳ ಬಾಹುಳ್ಯವಿದ್ದರೂ ಕೂಡ ನಗದು ಹಣಕ್ಕೆ. ಈಗಿನಂತೆ ಮೈಸೂರು ಪಟ್ಟಣದಲ್ಲಿ ಬಸ್ಸುಗಳು ಇರಲಿಲ್ಲ. ಎಲ್ಲಿಗೇ ಹೋಗಬೇಕಾದರೂ ನಡೆದೇ ಹೋಗಬೇಕಾದ ಪರಿಸ್ಥಿತಿ. ಪರಕಾಲ ಮಠದಲ್ಲಿ ಊಟದ ವ್ಯವಸ್ಥೆ. ಗುರುಗಳ ಮನೆಯ ಹತ್ತಿರವೇ ರೂಮು ಮಾಡಿಕೊಂಡು ತಮ್ಮ ಸಂಗೀತದ ಅಭ್ಯಾಸದ ಮುಂದುವರಿಕೆ. ಹೀಗೆ ವೀಣೆಯ ಕಲಿಕೆ ಅವರಿಗೆ ಕಲಿಸಿದ್ದು ಕೇವಲ ಸಂಗೀತವನ್ನು ಮಾತ್ರವಲ್ಲ ಬದುಕುವುದನ್ನೂ ಕೂಡ. ಅಪಾರವಾದ ತಾಳ್ಮೆ, ರಷ್ಣ, ಸಹಿಷ್ಣುತೆ, ಸಂಯಮ, ಆತ್ಮ ವಿಶ್ವಾಸ ಮತ್ತು ಬದುಕನ್ನು ಎದುರಿಸುವ ಧೈರ್ಯ ಇವೆಲ್ಲವೂ ಸಂಗೀತದೊಂದಿಗೇ ಅವರ ಬದುಕಿನಲ್ಲಿ ಹಾಸುಹೊಕ್ಕಾದವು.

	ವೈಣಿಕ ಪ್ರವೀಣ ವೆಂಕಟಗಿರಿಯಪ್ಪನವರು ವೈಣಿಕ ಶಿಖಾಮಣಿ ವೀಣಾ ಶೇಷಣ್ಣನವರ ಗರಡಿಯಲ್ಲಿ ಪಳಗಿದರು. ಆಗಿನ ಕಾಲಕ್ಕೆ ಶೇಷಣ್ಣ ಮತ್ತು ಸುಬ್ಬಣ್ಣನವರು ಮತ್ತು ಅವರ ವೀಣಾವಾದನ ಹಾಗೂ ಸಾಧನೆಗಳು ದಂತ ಕಥೆಯಾಗಿದ್ದವು. ಇಂಥ ದಿಗ್ಗಜಗಳಿಂದ ತಾವು ಪಡೆದ ವಿದ್ಯೆಯನ್ನು ವೆಂಕಟಗಿರಿಯಪ್ಪನವರು ವೀಣಾ ವಾದನದ ಎಲ್ಲಾ ತಂತ್ರಗಳನ್ನೂ ಅತ್ಯಂತ ಶ್ರದ್ಧಾಪೂರ್ವಕವಾಗಿ ತಮ್ಮ ಶಿಷ್ಯರಿಗೆ ಕಲಿಸಿ ಅವರು ಉತ್ಕøಷ್ಟ ದರ್ಜೆಯ ವೀಣಾವಾದಕರಾಗುವಂತೆ ರೂಪಿಸಿದರು. ಪದ್ಮಭೂಷಣ ಡಾ.ವಿ.ದೊರೆಸ್ವಾಮಿ ಅಯ್ಯಂಗಾರ್ಯ ಮತ್ತು ಆರ್ ಎನ್ ದೊರೆಸ್ವಾಮಿ ಶ್ರೀನಿವಾಸರ ಸಹಾಧ್ಯಾಯಿಗಳು.

	ಅಂದಿನಿಂದ ಇಂದಿನವರೆಗೂ ಸಂಗೀತ ಅದೇ ಆದರೂ, ರಾಗ ಮತ್ತು ಕೃತಿಗಳು ಅವೇ ಆದರೂ ಭಾವ ಮತ್ತು ಅಭಿವ್ಯಕ್ತಿಗಳೂ ಮಾತ್ರ ಸದಾ ಬೇರೆಯೇ ಆಗಿವೆ. ಇದು ಪ್ರತಿಯೊಂದು ವಾದ್ಯದ ವಿಚಾರಕ್ಕೂ ಸತ್ಯ. ಪ್ರತಿಯೊಬ್ಬ ಕಲಾವಿದರೂ ತಮ್ಮ ಮನೋಧರ್ಮ ಮತ್ತು ಸ್ವಭಾವಕ್ಕೆ ಅನುಗುಣವಾಗಿ ವಿಭಿನ್ನ ಅಭಿವ್ಯಕ್ತಿ ಮಾರ್ಗಗಳನ್ನು ಹುಡುಕಿಕೊಳ್ಳುತ್ತಾರೆ. ಗುರು ಶ್ರೀನಿವಾಸರು ತಮ್ಮ ಗುರುಗಳಿಂದ ಆದ ಪಾಠಾಂತರದ ಜೊತೆಗೇ ಮದ್ರಾಸಿನ ಅರಿಯಾಕುಡಿ, ಅಲತ್ತೂರು ಸಹೋದರರು, ಜಿ.ಎನ್.ಬಾಲಸುಬ್ರಮಣ್ಯಂ ಇವರ ಸಂಗೀತದ ಪ್ರಭಾವವೂ ಸಾಕಷ್ಟು ಗಾಢವಾಗಿತ್ತು ಎನ್ನುವುದನ್ನು ಅವರೇ ಸ್ವತಃ ಗುರುತಿಸಿಕೊಂಡಿದ್ದರು. ಅಂದಿನ ಕಲಿಕೆಯಲ್ಲಿ ಲಿಖಿತ ಅಂಶಗಳಿಗಿಂತ ಕೇಳ್ಮೆ ಹಾಗೂ ನೆನಪಿನ ಅಂಶಗಳು ಹೆಚ್ಚಾಗಿದ್ದವು ಎಂದು ತಮ್ಮ ಶಿಷ್ಯರಿಗೆ ಹೇಳುತ್ತಿದ್ದರು. “ಹಿಂದೆ ಯಾರೂ ಯಾವುದನ್ನೂ ಬರೆದುಕೊಡುತ್ತಿರಲಿಲ್ಲ. ಅವರು ಹೇಳಿಕೊಟ್ಟಿದ್ದನ್ನು ನೆನಪಿಟ್ಟುಕೊಂಡು ಅಭ್ಯಾಸ ಮಾಡುವುದು ಅನಿವಾರ್ಯವಾಗಿತ್ತು. ಇಂದಿನಂತೆ ಟೇಪ್‍ರೆಕಾರ್ಡ್‍ಗಳು ಇರಲಿಲ್ಲ. ಯಾವುದಾದರೂ ಕಛೇರಿಯಲ್ಲಿ ಕೇಳಿದ ಒಳ್ಳೆಯ ಸಂಗತಿಯನ್ನಾಗಲೀ ರಾಗಭಾವವನ್ನಾಗಲಿ, ಕಛೇರಿ ಮುಗಿಸಿ ಮನೆಗೆ ನಡೆದು ಬರುವಾಗ ಮನನ ಮಾಡಿಕೊಂಡು ಬಿಡಬೇಕಾಗುತ್ತಿತ್ತು ಏಕೆಂದರೆ ನಂತರದಲ್ಲಿ ಅದು ಮರೆತುಹೋಗಬಹುದೆಂಬ ಭಯವೂ ಇತ್ತು. ಅಂದು ಅದು ಕಷ್ಟ ಅನ್ನಿಸಿತ್ತು ನಿಜ ಆದರೆ ಅದೇ ನಮ್ಮಲ್ಲಿ ಅಪಾರವಾದ ನೆನಪಿನ ಶಕ್ತಿಯನ್ನು ಬೆಳೆಸಿದ್ದು ಎಂದು ಇಂದು ನಮಗೆ ಚೆನ್ನಾಗಿ ಅರಿವಾಗಿದೆ ಅಂದು ಹಾಗೆ ಸಂಗೀತವನ್ನು ಕೇಳುತ್ತಿದ್ದುದರಿಂದಲೇ ಒಂದೇ ರಾಗವನ್ನು ಎಷ್ಟು ವಿಭಿನ್ನ ಬಗೆಯಲ್ಲಿ ಅನುಸಂಧಾನ ಮಾಡಬಹುದು ಎಂದು ನಮಗೆ ಅರಿವಾಗಿದ್ದು. ಹಾಗಾಗಿ ಸಂಗೀತದಲ್ಲಿ ಕೇಳ್ಮೆಯ ಪಾತ್ರ ಬಹು ದೊಡ್ಡದು” ಎಂಬುದನ್ನು ಶ್ರೀನಿವಾಸ ಅಯ್ಯಂಗಾರರು ತಮ್ಮ ಶಿಷ್ಯರಿಗೆ ಯಾವಾಗಲೂ ಹೇಳುತ್ತಿರುತ್ತಾರೆ.

	ಅಂದು ಕಷ್ಟವಿದ್ದುದು ಕಲಿಕೆ ಮಾತ್ರವಲ್ಲ ಕಲಾವಿದನ ಸತ್ವದ ಪರೀಕ್ಷೆಯೂ ಕಠಿಣತರವಾಗಿತ್ತು. ಇಂದಿನಂತೆ ಯಾವ ಪರೀಕ್ಷೆಯಾಗಲೀ ಅಥವಾ ಯಾವ ವಶೀಲಿ ಹಾಗೂ ಪ್ರಭಾವಗಳಾಗಲೀ ಅಂದು ನಡೆಯುತ್ತಿರಲಿಲ್ಲ. ರಸಿಕರು ಮತ್ತು ಸಹೃದಯರು ಒಬ್ಬ ಕಲಾವಿದನ ಸತ್ವವನ್ನು ನಿರ್ಣಯಿಸುತ್ತಿದ್ದರು. ವೇದಿಕೆಯೇ ಒಬ್ಬ ಕಲಾವಿದನ ಮೌಲ್ಯವನ್ನು ನಿರ್ಧರಿಸುವ ಪರೀಕ್ಷಾ ರಂಗವಾಗಿತ್ತು. ಹಾಗಾಗಿ ಕಲಾವಿದನೊಬ್ಬನಿಗೆ ತನ್ನ ಪ್ರತಿಯೊಂದು ಕಚೇರಿಯೂ ಒಂದು ಪರೀಕ್ಷೆಯೇ ಆಗಿತ್ತು. ನಿರಂತರ ಅಭ್ಯಾಸದಿಂದ ಮಾತ್ರ ಆ ಪರೀಕ್ಷೆಯನ್ನು ಎದುರಿಸುವುದು ಸಾಧ್ಯವಾಗುತ್ತಿತ್ತು. ಹಾಗಾಗಿಯೇ ಸಂಗೀತದ ಗುಣಮಟ್ಟವೂ ಕೂಡ ತುಂಬಾ ಉತ್ತಮವಾಗಿ ಇರುತ್ತಿತ್ತು. ಆದ್ದರಿಂದಲೇ ಪ್ರತಿಯೊಬ್ಬ ಗುರುವೂ ತನ್ನ ಶಿಷ್ಯನನ್ನು ಸಾರ್ವಜನಿಕರ ಪರೀಕ್ಷೆಯನ್ನು ಎದುರಿಸುವಂತೆ ತರಬೇತುಗೊಳಿಸುತ್ತಿದ್ದರು. ಹಾಗಾಗಿಯೇ ಪ್ರಾರಂಭದಲ್ಲಿ ಪ್ರತಿಯೊಬ್ಬ ಕಲಾವಿದನೂ ಅರಮನೆ ಹಾಗೂ ಇತರ ಸಾಂಸ್ಕøತಿಕ ವೇದಿಕೆಗಳಲ್ಲಿ ಗುರುಗಳ ಜೊತೆಯಲ್ಲಿ ನುಡಿಸುತ್ತಲೇ ಸ್ವತಂತ್ರವಾಗಿ ನುಡಿಸುವುದನ್ನು ಅಭ್ಯಾಸ ಮಾಡಿಕೊಂಡು ಒಬ್ಬ ಸ್ವತಂತ್ರ ಕಲಾವಿದನಾಗಿ ಬೆಳೆಯುತ್ತಿದ್ದರು. ಇದು ಕೇವಲ ಕಲಿಕೆಯ ಒಂದು ಪ್ರಕ್ರಿಯೆ ಮಾತ್ರ ಆಗಿರಲಿಲ್ಲ. ಬದಲಾಗಿ ಒಂದು ಪರಂಪರೆಯನ್ನು ನಿರಂತರವಾಗಿ ಬೆಳೆಸುವಂಥ ಆರೋಗ್ಯಕರ ಪ್ರಕ್ರಿಯೆಯಾಗಿತ್ತು. ಕಲೆ ನಿಂತ ನೀರಾಗ ಬಾರದು ತಲೆಮಾರಿನಿಂದ ತಲೆಮಾರಿಗೆ ಹರಿಯ ಬೇಕೆಂಬ ಆರೋಗ್ಯಕರ ಮನಸ್ಸಿನ ಪ್ರತೀಕವಾಗಿತ್ತು. ಹಾಗಾಗಿಯೇ ಶ್ರೀನಿವಾಸಯ್ಯಂಗಾರ್ಯರಾ 80ರ ಈ ಇಳಿ ವಯಸ್ಸಿನಲ್ಲಿಯೂ ವೀಣೆಯನ್ನು ನಿರಂತರವಾಗಿ ಅಭ್ಯಾಸ ಮಾಡುವುದೇ ಅಲ್ಲದೆ. ವಿದ್ಯಾರ್ಥಿಗಳಿಗೆ ನಿಸ್ವಾರ್ಥ ಮನೋಭಾವದಿಂದ ಪಾಠ ಹೇಳಿಕೊಡುತ್ತಿದ್ದಾರೆ.

	ಶ್ರೀನಿವಾಸ ಅಯ್ಯಂಗಾರ್ಯರ ವೀಣಾ ವಾದನ ಶೈಲಿ ಅತ್ಯಂತ ವಿಶಿಷ್ಟವಾಗಿದೆ. ಹಾಡುಗಾರಿಕೆಯ ನವುರಾದ ಗಮಕಗಳು, ಬಿರ್ಕಾಗಳು ಮತ್ತು ಸ್ಫುಟವಾಗಿ ಹೊರಹೊಮ್ಮುವ ನಾದಮಾಧುರ್ಯ ಇವು ಇವರ ವೀಣಾ ವಾದನದ ವಿಶಿಷ್ಟತೆ. ವೀಣೆಯಲ್ಲಿ ಹೆಚ್ಚಿನ ವೇಗ ಅಂದರೆ ದ್ರುತ ಗತಿ ಸಾಧ್ಯವಿಲ್ಲ ಎನ್ನುವುದು ಸಾಮಾನ್ಯವಾಗಿ ಇರುವ ನಂಬಿಕೆ. ಆದರೆ ತಮ್ಮ ಅಪಾರ ಸಾಧನೆಯಿಂದ ಅದನ್ನು ಸುಳ್ಳಾಗಿಸಿದ್ದಾರೆ. ಈ ವಯಸ್ಸಿನಲ್ಲಿಯೂ ಅವರ ಕೈಯ್ಯಲ್ಲಿ ಗಮಕಗಳು ವೇಗವಾದ ನುಡಿಸಾಣಿಕೆಯಲ್ಲಿಯೂ ಅತ್ಯಂತ ಸ್ಫುಟವಾಗಿ ಮೂಡಿ ಬಂದು ಕೇಳುಗರಲ್ಲಿ ಅಚ್ಚರಿಯನ್ನೂ ಮೆಚ್ಚುಗೆಯನ್ನೂ ಮೂಡಿಸಿ ಒಂದು ಹೊಸ ಅನುಭವವನ್ನು ಉಂಟುಮಾಡುತ್ತದೆ. ಇವರ ಶೈಲಿ ಎಂಜೆಎಸ್ ಶೈಲಿ ಎಂದೇ ಹೆಸರುವಾಸಿಯಾಗಿದೆ.

	ತಮ್ಮಲ್ಲಿ ಇರುವುದನ್ನು ಬೇರೆಯವರಿಗೂ ಕೊಡುವ ಹಂಚುವ ಗುಣ ಇವರದು ಗಾನಕಲಾ ಪರಿಷತ್ತಿನಲ್ಲಿ ವಿದ್ಯಾರ್ಥಿ ವೇತನ ನೀಡಲು ಅನುಕೂಲವಾಗುವಂತೆ 10,000 ರೂಗಳ ಪುದುವಟ್ಟು ಇಟ್ಟಿದ್ದಾರೆ. ಮೈಸೂರಿನ ಗಾನಭಾರತಿಯಲ್ಲಿ ಕಛೇರಿ ಕಾರ್ಯಕ್ರಮವನ್ನು ಏರ್ಪಡಿಸುವ ವೆಚ್ಚವನ್ನು ಭರಿಸಲಿಕ್ಕಾಗಿ ತಮ್ಮ ತಂದೆ ಜನಾರ್ದನ ಅಯ್ಯಂಗಾರ್ ಅವರ ಹೆಸರಿನಲ್ಲಿ 10,000 ರೂಗಳ  ದತ್ತಿಯನ್ನು ಇಟ್ಟಿದ್ದಾರೆ. ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಮನೋಭಾವ.

	ಶ್ರೀನಿವಾಸ ಅಯ್ಯಂಗಾರರಿಗೆ ಶಿಕ್ಷಣ ನೀಡುವ ಬಗ್ಗೆ ಇರುವ ಅಪಾರ ಬದ್ಧತೆಗೆ ಅವರಿಂದ ವಿದ್ಯೆ ಕಲಿತು ಇಂದು ಪ್ರಪಂಚದ ವಿಭಿನ್ನ ಭಾಗಗಳಲ್ಲಿ ಇರುವ ಶಿಷ್ಯ ವೃಂದವೇ ಸಾಕ್ಷಿ. ಶ್ರೀನಿವಾಸರ ಶೈಲಿ ಅತ್ಯಂತ ಕಠಿಣವಾದುದು. ಆದರೆ ಅವರ ಹಿರಿಮೆ ಇರುವುದು ಇಂಥ ಕ್ಲಿಷ್ಟವಾದ ಶೈಲಿಯನ್ನು ಸ್ವಲ್ಪವೂ ಬೇಸರವಿಲ್ಲದೆ ತಮ್ಮ ಶಿಷ್ಯರಿಗೆ ಕಲಿಸುವ ತಾಳ್ಮೆಯಲ್ಲಿ. ಅವರ ಮುಂದೆ ಕಲಿಯಲು ಕುಳಿತಿರುವುದು ಆರು ವರುಷದ ಬಾಲಕಿಯೇ ಆದರೂ ಸ್ವಲ್ಪವೂ ಬೇಸರಿಸದೆ ಪಾಠ ಹೇಳುತ್ತಾರೆ. ನಿಸ್ವಾರ್ಥ ಮನೋಭಾವದಿಂದ ಪಾಠ ಹೇಳುವ ಇಂಥ ಗುರುಗಳು ಈಗಿನ ಕಾಲದಲ್ಲಿ ಅಪರೂಪ. ಇವರ ಶಿಷ್ಯರ ಪೈಕಿ ಮುಂಚೂಣಿಯಲ್ಲಿ ಇರುವವರು ವಿದುಷಿಯರಾದ ಎ.ಎಸ್. ಪದ್ಮ, ಎಂ.ಕೆ ಸರಸ್ವತಿ, ರಾಜಲಕ್ಷ್ಮಿ ವೆಂಕಟೇಶ್ ಮುಂತಾದವರು. ಅದಲ್ಲದೆ ಈಗ ಪ್ರವರ್ಧಮಾನಕ್ಕೆ ಬರುತ್ತಿರುವ ಸಹನಾ ಎಂಬ ಯುವ ಪ್ರತಿಭೆ. ಚೌಡಯ್ಯನವರು ಮೈಸೂರಿನಲ್ಲಿ ಸ್ಥಾಪಿಸಿದ್ದ ಅಯ್ಯನಾರ್ ಕಾಲೇಜ್ ಆಫ್ ಮ್ಯೂಸಿಕ್‍ನಲ್ಲಿ ಹಲವಾರು ವರ್ಷ ಅಧ್ಯಾಪಕರಾಗಿ ಕೃಷ್ಣಮೂರ್ತಿಪುರಂನಲ್ಲಿ ಇರುವ ಭಗಿನೀ ಸೇವಾ ಸಮಾಜದಲ್ಲಿ ಬೋಧಕರಾಗಿ ಟಿ.ನರಸೀಪುರದಲ್ಲಿ ಇರುವ ಚೌಡಯ್ಯ ಸ್ಮಾರಕ ವಿದ್ಯಾ ಸಂಸ್ಥೆಯಲ್ಲಿಯೂ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

	1944ರಿಂದಲೂ ಆಕಾಶವಾಣಿ ಚೆನ್ನೈ, ಬೆಂಗಳೂರು, ಮೈಸೂರು ಮತ್ತು ದೆಹಲಿಯಿಂದ ಇವರ ವೀಣಾ ವಾದನ ಕಾರ್ಯ ಕ್ರಮಗಳು ಪ್ರಸಾರವಾಗುತ್ತಿವೆ. ಈಗ ಇವರು ಆಕಾಶವಾಣಿಯ “ಎ ಟಾಪ್” ಕಲಾವಿದರು. ಆಕಾಶವಾಣಿಯಲ್ಲಿ ಪ್ರಸಾರವಾದ ಇವರ ರಾಷ್ಟ್ರೀಯ ಕಾರ್ಯಕ್ರಮ ಎಲ್ಲರ ಮೆಚ್ಚುಗೆಯನ್ನೂ ಗಳಿಸಿಕೊಂಡಿದೆ ದೂರದರ್ಶನದಲ್ಲಿಯೂ ಇವರ ರಾಷ್ಟ್ರೀಯ ಕಾರ್ಯಕ್ರಮ ಪ್ರಸಾರವಾಗಿದೆ ಹಾಗೂ ಉದಯ ಮತ್ತು ಚಂದನ ಟಿ.ವಿಯಲ್ಲಿ ಇವರ ಕಾರ್ಯಕ್ರಮ ಪ್ರಸಾರವಾಗುತ್ತಿರುತ್ತವೆ. ಸುಪ್ರಸಿದ್ಧ ಸಂಗೀತ ಸಭೆಗಳಲ್ಲ್ಲಿ ಇವರ ವೀಣಾವಾದನ ಕಾರ್ಯಕ್ರಮ ಪಡೆದಿದೆ. ಗೌರವ ಸನ್ಮಾನಗಳು ಸಂದಿವೆ.ಆದರೆ ಇವೆಲ್ಲಕ್ಕಿಂತಲೂ ದೊಡ್ಡ ಗೌರವ ಇವರಿಗೆ ಸಂದ ಗೌರವ ಸಂಗೀತ ಕಲಾಭಿವರ್ಧಿನಿ ಸಭಾದ ಆಶ್ರಯದಲ್ಲಿ ಇವರ ಕಛೇರಿ ನಡೆದಾಗ ವಿದ್ವಾನ್ ವಾಸುದೇವಾಚಾರ್ಯರು ಉಪಸ್ಥಿತರಿದ್ದು ಇವರ ವಾದನವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು. ಅದಕ್ಕಿಂತಲೂ ಬೇರೆ ಯಾವ ಪ್ರಶಸ್ತಿ ಬೇಕು? ರಷ್ಯಾ ದೇಶದ ಹಿರಿಯ ನಾಯಕರಾದ ಬುಲ್ಗಾನಿನ್ ಮತ್ತು ಕ್ರುಶ್ಚೇವ್ ಅವರ ಗೌರವಾರ್ಥ ಲಾಲ್‍ಬಾಗಿನ ಗಾಜಿನ ಮನೆಯಲ್ಲಿ ನಡೆದ ಪಂಚವೀಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು.

	ವಿಶ್ವವಿದ್ಯಾನಿಲಯವೂ ಸೇರಿದಂತೆ ವಿವಿಧ ಪರೀಕ್ಷೆಗಳ ಪರೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿಯ ಅಡಿಷನ್ ಬೋರ್ಡ್‍ನ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಕರ್ನಾಟಕ ಪ್ರೌಢಶಿಕ್ಷಣ ಮಂಡಲಿಯು ಹೊರತಂದಿರುವ ಸೀನಿಯರ್ ಪರೀಕ್ಷೆಯ ಪರಿಷ್ಕøತ ಪಠ್ಯಪುಸ್ತಕದ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಇವರ ವಿದ್ವತ್ತು ಮತ್ತು ಸಾಧನೆಗಳನ್ನು ಗುರುತಿಸಿ ಕರ್ನಾಟಕ ಸರ್ಕಾರ ಇವರಿಗೆ ಮಾಶಾಸನ ನೀಡುತ್ತಿದೆ.

	ಹಲವಾರು ಪ್ರಶಸ್ತಿಗಳು ಮತ್ತು ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ. ಗಾನಕಲಾ ಪರಿಷತ್ತು 1993ರಲ್ಲಿ ಗಾನಕಲಾ ಭೂಷಣ ಎಂಬ ಬಿರುದನ್ನಿತ್ತು ಇವರನ್ನು ಗೌರವಿಸಿದೆ. ಸಂಗೀತ ನೃತ್ಯ ಅಕಾಡೆಮಿಯ ಗಾನಕಲಾ ತಿಲಕ (1994) ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ (1994), ಚೌಡಯ್ಯ ಸ್ಮಾರಕ ಕಲಾಜ್ಯೋತಿ ಪ್ರಶಸ್ತಿ (1999), ಸಂಗೀತ ಕಲಾಭೂಷಣ, ವೀಣಾ ಮಾಧುರ್ಯಗಿರಿ, ಆದರ್ಶ ಸಂಸ್ಥೆಯ ಗಾಯನ ಲಯ ಸಾಮ್ರಾಟ, ಅನನ್ಯದ ಜೀವಮಾನದ ಸಾಧನೆಗಾಗಿ ನೀಡಿದ ಕಲಾಕೌಸ್ತುಭ ಪ್ರಶಸ್ತಿ ಮತ್ತು ರಾಜ್ಯ ಸರಕಾರ ನೀಡುವ ಪ್ರತಿಷ್ಠಿತ ಕನಕಪುರಂದರ ಪ್ರಶಸ್ತಿ (2000) ಇವರಿಗೆ ಲಭಿಸಿದೆ. 		
(ಎ.ಎಸ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ